ಶಾಂತವೇರಿ ಗೋಪಾಲಗೌಡ
 	1923-72. ಸಮಾಜವಾದಿ ಧುರೀಣ, ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದ ಯುವ ನಾಯಕ ಹಾಗೂ ಸ್ವಾತಂತ್ರ್ಯ ಹೋರಾಟಗಾರ.

	ಇವರು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಶಾಂತವೇರಿಯಲ್ಲಿ ಬಡ ರೈತ ಕುಟುಂಬದಲ್ಲಿ 1923 ಮಾರ್ಚ್ 14ರಂದು ಜನಿಸಿದರು. ತಂದೆ ಕೊಲ್ಲೂರಯ್ಯ ಅಂಚೆ ಇಲಾಖೆಯಲ್ಲಿ ಅಂಚೆ ಬಟವಾಡೆ ಮಾಡುವ ಪೇದೆಯಾಗಿದ್ದರು. ಗೋಪಾಲಗೌಡರು ಬಡತನದ ಕಷ್ಟ ಕಾರ್ಪಣ್ಯಗಳನ್ನು ಸಹಿಸಿಕೊಂಡು ಶಾಂತವೇರಿ, ತೀರ್ಥಹಳ್ಳಿ ಮತ್ತು ಮೈಸೂರುಗಳಲ್ಲಿ ವಿದ್ಯಾಭ್ಯಾಸ ಮಾಡಿದರು. ಉಜ್ವಲ ದೇಶಾಭಿಮಾನ ಇವರದಾಗಿತ್ತು. ಜಮೀನುದಾರರ ಶೋಷಣೆ, ರೈತರ ಕಷ್ಟ, ಸಾಮಾನ್ಯ ಜನರ ಬಡತನಗಳು ಸದಾಕಾಲ ಇವರನ್ನು ಚಿಂತೆಗೀಡುಮಾಡುತ್ತಿದ್ದ ವಿಷಯಗಳಾಗಿದ್ದವು. ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೇ ಇಂಟರ್ ಮೀಡಿಯೇಟ್ ಶಿಕ್ಷಣಕ್ಕೆ ವಿದಾಯಹೇಳಿ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. 1946ರಲ್ಲಿ ನಂಜನಗೂಡಿನಲ್ಲಿ ಸೇರಿದ್ದ ಅಖಿಲ ಕರ್ನಾಟಕ ವಿದ್ಯಾರ್ಥಿ ಕಾಂಗ್ರೆಸ್ ಸಮ್ಮೇಳನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮೈಸೂರಿನ ಆಗಿನ ರಾಜಕೀಯ ಧುರೀಣರಲ್ಲಿ ಅನೇಕರು ಕರ್ನಾಟಕದ ಏಕೀಕರಣದ ಬಗ್ಗೆ ಅಡ್ಡಗೋಡೆಯ ಮೇಲಿನ ನಿಲುವು ತಾಳಿದಾಗ ಶಿವಮೊಗ್ಗದಲ್ಲಿ ಸಮಾವೇಶಗೊಂಡಿದ್ದ ವಿದ್ಯಾರ್ಥಿ ಸಮ್ಮೇಳನ ಚರಿತ್ರಾರ್ಹವಾಗಿತ್ತು. ಕನ್ನಡ ಮಾತನಾಡುವ ಜನರಿರುವ ಎಲ್ಲ ಪ್ರದೇಶಗಳನ್ನು ಒಳಗೊಂಡ ಕರ್ನಾಟಕ ರಾಜ್ಯ ರೂಪಿತವಾಗಬೇಕೆಂದು ಆ ಸಮ್ಮೇಳನ ನಿರ್ಣಯ ಮಾಡಿತು. ಆಗಿನಿಂದಲೇ ಇವರು ಶಿವಮೊಗ್ಗದ ಇತರ ಯುವ ಮುಖಂಡರೊಡನೆ ಸೇರಿ ಕರ್ನಾಟಕದ ಏಕೀಕರಣಕ್ಕಾಗಿ ಹಗಲಿರುಳು ಸತತವಾಗಿ ಶ್ರಮಿಸಿದರು.

1948ರಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಸಮಾಜ ವಾದಿ ಪಕ್ಷವನ್ನು ಸೇರಿದರು. ಶಿವಮೊಗ್ಗ ಜಿಲ್ಲೆಯ ಈ ಯುವಕ ತಂಡದವರೇ ರಾಜ್ಯ ದಲ್ಲಿ ಸಮಾಜವಾದಿ ಪಕ್ಷದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಇವರು ಈ ಗೆಳೆಯರ ಬಳಗಕ್ಕೆ ಮುಂದಾಳಾಗಿದ್ದರು. 

ಸಮಾಜವಾದಿ ಪಕ್ಷ ಗೇಣಿದಾರರ ಹಿತರಕ್ಷಣೆಗಾಗಿ ಹೋರಾಟ ಮಾಡುವ ನಿರ್ಧಾರ ಕೈಗೊಂಡ ಮೇಲೆ ಶಿವಮೊಗ್ಗ ಜಿಲ್ಲೆಯ ಕಾಗೋಡಿನಲ್ಲಿ 1951ರಲ್ಲಿ ನಡೆದ ಪ್ರಥಮ ಹೋರಾಟ ಬಹು ದಿನಗಳ ಕಾಲ ಉಗ್ರವಾಗಿ ನಡೆಯಿತು. ಇವರು ಸತ್ಯಾಗ್ರಹದ ನೇತೃತ್ವವಹಿಸಿ ಗೇಣಿದಾರರ ಜ್ವಲಂತ ಸಮಸ್ಯೆ ಬಗ್ಗೆ ರಾಜ್ಯದ ಜನರ ಹಾಗೂ ಪ್ರಭುತ್ವದ ಗಮನವನ್ನು ಸೆಳೆದರು. ಸಮಾಜವಾದಿ ಧುರೀಣ ರಾಮಮನೋಹರ ಲೋಹಿಯಾರವರು ಕಾಗೋಡು ಸತ್ಯಾಗ್ರಹದಲ್ಲಿ ಭಾಗವಹಿಸಲು ಬರುವಂತಾಯಿತು. ಈ ಸಂದರ್ಭದಲ್ಲಿ ಲೋಹಿಯರ ನಿಕಟ ಪರಿಚಯ ವಾಯಿತು. ಸಮಾಜವಾದಿ ತತ್ತ್ವಗಳಿಂದ ವಿದ್ಯಾರ್ಥಿ ದೆಸೆಯಿಂದಲೇ ಪ್ರಭಾವಿತರಾಗಿದ್ದ ಲೋಹಿಯರ ವಿಚಾರ ದರ್ಶನವೂ ಬಹಳ ಪ್ರಭಾವ ಬೀರಿತು. 

	1955ರಲ್ಲಿ ಸಮಾಜವಾದಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ಆಯ್ಕೆಯಾಗಿ 1957ರಲ್ಲಿ ಕರ್ನಾಟಕದಲ್ಲಿ ಸಮಾಜವಾದಿ ಯುವಜನ ಸಭಾವನ್ನು ಸ್ಥಾಪಿಸಿದರು. 1960ರಲ್ಲಿ ಗೋವ ವಿಮೋಚನಾ ಚಳವಳಿಯಲ್ಲಿ ಭಾಗಿಯಾಗಿ ಸಮಾಜವಾದಿ ಪಕ್ಷದ ಮಾರ್ಗದರ್ಶಿ ಪತ್ರಿಕೆಯ ಪ್ರಕಟಣೆ ಆರಂಭಿಸಿದರು.

	1952ರಲ್ಲಿ ನಡೆದ ಮಹಾಚುನಾವಣೆಯಲ್ಲಿ ಸಾಗರ-ಹೊಸನಗರ ಕ್ಷೇತ್ರದಿಂದ ಅಂದಿನ ಮೈಸೂರು ರಾಜ್ಯ ವಿಧಾನಸಭೆಗೆ ಚುನಾಯಿತ ರಾದರು. ಮುಂದೆ 1962 ಹಾಗೂ 1967ರಲ್ಲಿ ಎರಡು ಬಾರಿ ವಿಧಾನಸಭೆಗೆ ಚುನಾಯಿತರಾದರು. ವಿಧಾನಸಭೆಯಲ್ಲಿ ಇವರು ಮಾಡುತ್ತಿದ್ದ ಭಾಷಣಗಳು ಎಲ್ಲ ಪಕ್ಷದ ಸದಸ್ಯರ ಮೆಚ್ಚುಗೆಗೂ ಪಾತ್ರವಾಗಿದ್ದವು. ವಿಧಾನ ಮಂಡಲದ ಕಾರ್ಯಕಲಾಪಗಳು ಕನ್ನಡದಲ್ಲೇ ಜರುಗಬೇಕೆಂದು ಇವರು ತೀವ್ರ ಆಗ್ರಹ ಮಾಡುತ್ತಿದ್ದರು. ಕರ್ನಾಟಕದಲ್ಲಿ ಶಿಕ್ಷಣ, ಆಡಳಿತ, ಶಾಸನ ಮತ್ತು ನ್ಯಾಯಾಂಗ ಈ ಎಲ್ಲ ಕ್ಷೇತ್ರಗಳಲ್ಲೂ ಕನ್ನಡವೇ ಮಾಧ್ಯಮ ವಾಗಬೇಕೆಂದು ಇವರು ತಮ್ಮ ಪಕ್ಷದ ಸದಸ್ಯರೊಂದಿಗೆ ತೀವ್ರ ಚಳವಳಿ ಮಾಡಿದರು. ಸಮಾಜವಾದ, ಪ್ರಜಾತಂತ್ರ, ನಾಡು, ನುಡಿ ಮತ್ತು ಮಾನವಿಯತೆಯ ಹೆಗ್ಗಳಿಕೆಗಾಗಿ ಅವಿಶ್ರಾಂತರಾಗಿ ದುಡಿದರು. ಇವರ ಬದುಕು, ಸಾಧನೆ, ಹೋರಾಟಗಳನ್ನು ಕುರಿತಂತೆ ಹಲವಾರು ಕೃತಿಗಳು ಪ್ರಕಟಗೊಂಡಿವೆ : ಕರ್ನಾಟಕ ವಿಧಾನಸಭೆ ಸಚಿವಾಲಯ, ಬೆಂಗಳೂರು ಇವರು ಪ್ರತಿಭಾವಂತ ಸಂಸದೀಯ ಪಟುಗಳ ಬದುಕು ಬರೆಹ ಮಾಲಿಕೆಯಲ್ಲಿ ಶಾಂತವೇರಿ ಗೋಪಾಲಗೌಡ ಕೃತಿಯನ್ನು ಪ್ರಕಟಿಸಿದೆ(1999). ಶಾಸನ ಸಭೆಯಲ್ಲಿ ಶಾಂತವೇರಿ (1971), ಕಾಗೋಡು ಸತ್ಯಾಗ್ರಹ (1980), ಕಾಗೋಡು ಕ್ರಾಂತಿ (1982), ಗೋಪಾಲಗೌಡ ಡೈರಿ, ಪತ್ರಗಳು ಹಾಗೂ ಗೋಪಾಲಗೌಡ ಶಾಂತವೇರಿ (1982) ಶಾಂತವೇರಿ ಗೋಪಾಲಗೌಡರ ನೆನಪಿನ ಸಂಪುಟ (1997) ಇವುಗಳಲ್ಲಿ ಮುಖ್ಯವಾದುವು. ಇವರು ತಮ್ಮ 49ನೆಯ ವಯಸ್ಸಿನಲ್ಲಿ 1972 ಜೂನ್ 9ರಂದು ನಿಧನರಾದರು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

	   *